ಬುಲ್‍ಬುಲ್ - 
ಪ್ಯಾಸೆರಿಫಾರ್ಮೀಸ್ ಗಣದ ಪಿಕ್ನೂನೋಟಿಡೀ ಕುಟುಂಬಕ್ಕೆ ಸೇರಿದ ಸುಮಾರು 14 ಜಾತಿಯ ಹಾಡುಹಕ್ಕಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು. ಇವುಗಳಲ್ಲಿ ಸುಮಾರು 119 ಪ್ರಭೇದಗಳಿವೆ. ದಕ್ಷಿಣ ಏಷ್ಯ ಮತ್ತು ಆಫ್ರಿಕಗಳಲ್ಲಿ ಮಾತ್ರ ವಾಸಿಸುವ ಇವು ಇಲ್ಲಿಯ ದೇಶಗಳ ಕೃಷಿ ಭೂಮಿಗಳ ಬಳಿ, ಹಳ್ಳಿಗಳ ಆಸುಪಾಸಿನಲ್ಲಿ, ಹಣ್ಣಿನ ತೋಟ, ಉದ್ಯಾನವನಗಳಲ್ಲಿ ಬಲು ಸಾಮಾನ್ಯವಾಗಿ ಗೋಚರಿಸುತ್ತಿದ್ದು ಆ ಪ್ರದೇಶಗಳ ಹಾಡುಹಕ್ಕಿಗಳ ಪೈಕಿ ಪ್ರಮುಖವಾಗಿವೆ. 

	ಎಲ್ಲವೂ ಸಾಧಾರಣ ಗಾತ್ರದ ಹಕ್ಕಿಗಳು; ಇವುಗಳ ಉದ್ದ 15-28ಸೆಂಮೀ. ರೆಕ್ಕೆಗಳು ಮತ್ತು ಕತ್ತು ಮೋಟಾಗಿವೆ. ಬಾಲ ಉದ್ದ; ಕೆಲವೊಮ್ಮೆ ಇಬ್ಭಾಗವಾಗಿರುವುದುಂಟು. ಕೊಕ್ಕುಸಪೂರವಾಗಿಯೂ ಕೆಳಮುಖವಾಗಿ ನಸುಬಾಗಿದಂತೆಯೂ ಇದೆ. ತುದಿ ಕೊಕ್ಕೆಯಂತೆ ಬಾಗಿದೆ. ದೇಹದ ಬಣ್ಣ ಬೂದು, ಕಂದು, ಮಾಸಲು ಹಸುರು ಕಪ್ಪು ಇತ್ಯಾದಿ. ಕೆಲವು ಪ್ರಭೇದಗಳಲ್ಲಿ ತಲೆಯ ಅಕ್ಕಪಕ್ಕ, ಕೆನ್ನೆಯ ಮೇಲೆ ಇಲ್ಲವೆ ಬಾಲದ ಬುಡದ ಬಳಿ ಕೆಂಪು, ಬಿಳಿ ಅಥವಾ ಹಳದಿ ಬಣ್ಣದ ಗುರುತು ಮಚ್ಚೆಗಳುಂಟು. ಹಲವು ಪ್ರಭೇದಗಳ ತಲೆಯ ಮೇಲೆ ಶಿಖೆಯ ಅಲಂಕರಣವಿದೆ. ಹೆಣ್ಣುಗಂಡುಗಳ ನಡುವೆ ಗಾತ್ರ ವ್ಯತ್ಯಾಸ ವಿನಾ ವರ್ಣವ್ಯತ್ಯಾಸ ಇಲ್ಲ. 

	ಬುಲ್‍ಬುಲ್‍ಗಳು ಪ್ರಧಾನವಾಗಿ ಕಾಡಿನ ಹಕ್ಕಿಗಳು. ಕುರುಚಲು ಕಾಡುಗಳಲ್ಲೂ ಅಲ್ಲಲ್ಲಿ ಪೊದೆಗಳಿರುವಂಥ ಹುಲ್ಲುಗಾವಲುಗಳಲ್ಲೂ ಕೆಲವು ಪ್ರಭೇದಗಳು ವಾಸಿಸುವುದುಂಟು. 

	ಜಾತಿಸಂಖ್ಯೆಯ ಸಮೃದ್ಧಿಯ ದೃಷ್ಟಿಯಿಂದ ಆಫ್ರಿಕ ಮತ್ತು ಮ್ಯಾಲಗ್ಯಾಸೀಗಳು ಪ್ರಮುಖವೆನಿಸಿವೆ. ಬುಲ್ ಬುಲ್ ಹಕ್ಕಿಗಳ 14 ಜಾತಿಗಳ ಪೈಕಿ 13 ಜಾತಿಗಳನ್ನು ಇಲ್ಲಿ ಕಾಣಬಹುದು. ಅತ್ಯಂತ ದೊಡ್ಡ ಹಾಗೂ ಪರಿಚಿತ ಜಾತಿಯೆಂದರೆ ಪಿಕ್ನೊನೋಟಸ್. ಇದರಲ್ಲಿ 47 ಪ್ರಭೇದಗಳಿವೆ; ಇವುಗಳ ಪೈಕಿ ಪಿಕ್ನೊನೋಟಸ್ ಜೋಕೋಸಸ್ (ರೆಡ್ ಹ್ವಿಸ್ಕರ್ಡ್ ಬುಲ್‍ಬುಲ್) ಎಂಬುದು ಭಾರತ, ಚೀನ, ಜಾವ, ಸುಮಾತ್ರ, ಆಫ್ರಿಕ ಇಲ್ಲೆಲ್ಲ ಕಾಣಬರುತ್ತದೆ. ಆಸ್ಟ್ರೇಲಿಯದಲ್ಲೂ ಇದನ್ನು ತಂದು ಬಿಡಲಾಗಿದೆ. ಇದನ್ನು ಸಾಕುವುದೂ ಉಂಟು. ಬುಲ್ ಬುಲ್ ಹಕ್ಕಿಗಳು ಕೀಟ ಇತ್ಯಾದಿಗಳನ್ನು ತಿನ್ನುವುದಾದರೂ ಹಣ್ಣು ಕಾಯಿಗಳೇ ಇವುಗಳ ಪ್ರಧಾನ ಹಾಗೂ ಮೆಚ್ಚಿನ ಆಹಾರ. ಇವು ಗುಂಪು ಗುಂಪಾಗಿ ಆಹಾರಾನ್ವೇಷಣೆಯಲ್ಲಿ ಮಗ್ನವಾಗುವುವು. ತುಂಬಾ ಚುರುಕಾಗಿದ್ದು ಕುತೂಹಲ ತೋರುತ್ತ, ಹರ್ಷಚಿತ್ತದಿಂದ ಮಧುರ ಸ್ವರಗೈಯುತ್ತ ಸ್ನೇಹ ಪೂರಿತವಾಗಿ ಹಾರಾಡುವ ಇವು ಬಲು ಜನಪ್ರಿಯ ಹಕ್ಕಿಗಳೆನಿಸಿವೆ. ಇವು ತುಂಬ ಧೈರ್ಯಶಾಲಿ ಹಕ್ಕಿಗಳೂ ಹೌದು. ತಮ್ಮ ಗೂಡಿಗೆ ದಾಳಿಯಿಕ್ಕುವ ಗೂಬೆ, ಕಾಗೆ, ಮ್ಯಾಗ್‍ಪೈ ಮುಂತಾದ ಹಕ್ಕಿಗಳನ್ನು ಒಟ್ಟಾಗಿ ಅಟ್ಟಿಸಿಕೊಂಡು ಹೋಗಿ ಹಿಮ್ಮೆಟ್ಟಿಸುವುದುಂಟು.

	ಪೂರ್ವ ಏಷ್ಯ ಮತ್ತು ಜಪಾನುಗಳಲ್ಲಿ ಕಾಣದೊರೆಯುವ ಕಂದು ಕೆನ್ನೆಯ ಬುಲ್‍ಬುಲ್ ವಿನಾ ಉಳಿದವುಗಳಲ್ಲಿ ವಲಸೆ ಹೋಗುವ ಪರಿಪಾಟ ಇಲ್ಲ. ಹೆಚ್ಚೆಂದರೆ ಬೆಟ್ಟದ ಮೇಲಿರುವಂಥವು ಕೆಳಗೆ ಮೈದಾನಕ್ಕೆ ಹಾರಿ ಬರುವುದುಂಟು.

	ಪೊದೆಗಳ ಮರಗಳ ರೆಂಬೆಗಳ ಮೇಲೆ ಹುಲ್ಲು, ನಾರು ಮುಂತಾದವನ್ನು ಬಳಸಿ ಬಟ್ಟಲಿನಂಥ ಗೂಡನ್ನು ರಚಿಸಿ ಸಾಧಾರಣವಾಗಿ ಒಂದು ಸಲಕ್ಕೆ 2-3 ಮೊಟ್ಟೆಗಳನ್ನಿಡುವುವು.	
(ಕೆ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ